1 Chronicles 14

ದಾವೀದನು ಅರಮನೆಯನ್ನು ಕಟ್ಟಿಸಿಕೊಂಡದ್ದು

1ತೂರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವುದಕ್ಕೋಸ್ಕರ ದೂತರನ್ನೂ, ದೇವದಾರುಮರಗಳನ್ನೂ, ಶಿಲ್ಪಿಗಳನ್ನೂ ಮತ್ತು ಬಡಗಿಗಳನ್ನು ಅವನ ಬಳಿಗೆ ಕಳುಹಿಸಿದನು. 2ಇದರಿಂದ ದಾವೀದನು ದೇವರ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ತನ್ನ ರಾಜ್ಯವು ಉನ್ನತ ಸ್ಥಾನಕ್ಕೆ ಮುಟ್ಟಿದ್ದನ್ನು ನೋಡಿ ಯೆಹೋವನು ತನ್ನನ್ನು ಇಸ್ರಾಯೇಲರಿಗೆ ರಾಜನನ್ನಾಗಿ ಸ್ಥಿರಪಡಿಸಿದನೆಂದು ತಿಳಿದುಕೊಂಡನು.

3ದಾವೀದನು ಯೆರೂಸಲೇಮಿನಲ್ಲಿಯೂ ಸಹ ಕೆಲವು ಸ್ತ್ರೀಯರನ್ನು ಮದುವೆಮಾಡಿಕೊಂಡು ಇನ್ನೂ ಕೆಲವು ಗಂಡು ಹೆಣ್ಣು ಮಕ್ಕಳನ್ನು ಪಡೆದನು. 4ಅಲ್ಲಿ ಅವನಿಗೆ ಹುಟ್ಟಿದ ಗಂಡು ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, 5ಇಬ್ಹಾರ್, ಎಲೀಷೂವ, ಎಲ್ಪೆಲೆಟ್, 6ನೋಗಹ, ನೆಫೆಗ್, ಯಾಫೀಯ, 7ಎಲೀಷಾಮ್, ಬೇಲ್ಯಾದ ಮತ್ತು ಎಲೀಫೆಲೆಟ್.

ಫಿಲಿಷ್ಟಿಯರು ಮೇಲೆ ದಾವೀದನ ವಿಜಯ

8ಇಸ್ರಾಯೇಲ್ಯರೆಲ್ಲರೂ ದಾವೀದನನ್ನು ಅಭಿಷೇಕಿಸಿ ಅವನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿದಾಗ ಅವರು ಅವನನ್ನು ಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ತಾನೂ ಅವರನ್ನೆದುರಿಸಲು ಹೋದನು. 9ಫಿಲಿಷ್ಟಿಯರು ದೇಶದೊಳಗೆ ನುಗ್ಗಿ, ರೆಫಾಯೀಮ್ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.

10ದಾವೀದನು ದೇವರಾದ ಯೆಹೋವನನ್ನು, <<ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ>> ಎಂದು ಕೇಳಿದನು. ಅದಕ್ಕೆ ಯೆಹೋವನು, <<ಹೋಗು ನಾನು ಅವರನ್ನು ನಿನ್ನ ಕೈಗೆ ಒಪ್ಪಿಸುವೆನು>> ಎಂದು ಉತ್ತರ ಕೊಟ್ಟನು. 11ಅಷ್ಟರಲ್ಲಿ ಬಾಳ್ ಪೆರಾಚೀಮಿಗೆ ಬಂದ ಅವರನ್ನು ದಾವೀದನು ಸೋಲಿಸಿ, <<ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ>> ಎಂದು ಹೇಳಿದ್ದರಿಂದ ಆ ಯುದ್ಧ ಸ್ಥಳಕ್ಕೆ ಬಾಳ್ ಪೆರಾಚೀಮ್ ಎಂದು ಹೆಸರಾಯಿತು. 12ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ದೇವರುಗಳನ್ನು ಸುಟ್ಟುಬಿಡುವಂತೆ ದಾವೀದನು ಅಪ್ಪಣೆ ಕೊಟ್ಟನು.

13ಫಿಲಿಷ್ಟಿಯರು ಮತ್ತೊಮ್ಮೆ ಬಂದು ಅದೇ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು. 14ದಾವೀದನು ಪುನಃ ದೇವರ ಸನ್ನಿಧಿಯಲ್ಲಿ ವಿಚಾರಿಸಿದಾಗ ಯೆಹೋವನು ಅವನಿಗೆ, <<ನೀನು ಅವರನ್ನು ಬೆನ್ನಟ್ಟಬೇಡ, ಅವರ ಎದುರುಗಡೆಯಿಂದ ದಾಳಿಮಾಡದೆ ಹಿಂತಿರುಗಿ ಹೋಗಿ ಬಾಕಾಮರಗಳಿರುವ ಕಡೆಯಿಂದ ಅವರ ಮೇಲೆ ದಾಳಿಮಾಡು.

15ಬಾಕಾಮರಗಳ ತುದಿಯಲ್ಲಿ ಹೆಜ್ಜೆಗಳ ಶಬ್ದವು ಕೇಳಿಸುವಾಗಲೇ ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನನ್ನು ಮುನ್ನಡೆಸುತ್ತಿದ್ದಾನೆ ಎಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು>> ಎಂದನು. 16ದಾವೀದನು ದೇವರ ಆಜ್ಞಾನುಸಾರವಾಗಿ ಮಾಡಿದನು. ಇಸ್ರಾಯೇಲರು ಫಿಲಿಷ್ಟಿಯರ ಸೈನ್ಯವನ್ನು ಗಿಬ್ಯೋನಿನಿಂದ ಗೆಜೆರಿನ ವರೆಗೂ ಸಂಹರಿಸುತ್ತಾ ಹೋದರು. ದಾವೀದನ ಕೀರ್ತಿಯು ಎಲ್ಲಾ ದೇಶಗಳಲ್ಲಿ ಹಬ್ಬಿತು. ಯೆಹೋವನು ಅವನಿಗೆ ಎಲ್ಲಾ ಜನಾಂಗಗಳೂ ಹೆದರಿ ನಡೆಯುವಂತೆ ಮಾಡಿದನು.

17

Copyright information for KanULB